ಸಂಧಿ-೧, ಪೀಠಿಕಾ ಸಂಧಿ

ಶ್ರೀವನಿತೆಯರಸನೆ ವಿಮಲ ರಾ|

ಜೀವ ಪೀಠನ ಪಿತನೆ ಜಗಕತಿ

ಪಾವನನೆ ಸನಕಾದಿ ಸಜ್ಜನ ನಿಕರ ದಾತಾರ

ರಾವಣಾಸುರಮಥನ ಶ್ರವಣ ಸು|

ಧಾವಿನೂತನ ಕಥನ ಕಾರಣ

ಕಾವುದಾನತ ಜನವ ಗದುಗಿನ ವೀರನಾರಯಣ||೧|| (ಕಾವುದು +ಆನತ ಜನವ)

ಶರಣಸಂಗವ್ಯಸನ ಭುಜಗಾ |

ಭರಣನಮರಕಿರೀಟ ಮಂಡಿತ 

ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ 

ಕರಣ ನಿರ್ಮಲ ಭಜಕರಘ ಸಂ |

ಹರಣ ದಂತಿ ಚಮೂರು ಚರ್ಮಾಂ 

ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ || ೨||

ವರಮಣಿಗಳಿಂದೆಸೆವ ಮೌಳಿಯ

ಸರಸಿಜಾರಿಯ ಕಿರಣದೋಳಿಯ 

ವಿರಚಿಸಿದ ಸಿಂಧೂರ ಭಾಳದಿ ಕುಣಿವ ಕುಂತಳದ 

ಕರಿ ನಿಭಾಕೃತಿಯೆನಿಪ ವದನದ 

ಕರದ ಪಾಶದ ಮೋದಕದ ವಿ

ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ||೩||

ಗಜಮುಖನೆ ಮೆರೆವೇಕದಂತನೆ 

ನಿಜಗುಣಾನ್ವಿತ ಪರಶುಧಾರನೆ 

ರಜತಗಿರಿಗೊಡೆಯನ ಕುಮಾರನೆ ವಿದ್ಯವಾರಿಧಿಯೆ 

ಅಜನು ಹರಿರುದ್ರಾದಿಗಳು ನೆರೆ 

ಭಜಿಸುತಿಹರನವರತ ನಿನ್ನನು 

ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ।। ೪ ।।

ವಾರಿಜಾಸನೆ ಸಕಲಶಾಸ್ತ್ರ ವಿ 

ಚಾರದುದ್ಭವೆ ವಚನರಚನೋ 

ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೆ 

ಶೌರಿ ಸುರಪತಿ  ಸಕಲ ಮುನಿಜನ 

ಸೂರಿಗಳಿಗನುಪಮದ ಯುಕುತಿಯೆ 

ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ ।। ೫ ।।